ಕ್ರಿಪ್ಟ್ಯಾಂತಸ್

	ಬ್ರೊಮೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ ಜಾತಿ ; ಬ್ರಜಿಲ್ ದೇಶದ ಮೂಲವಾಸಿ. ಸುಮಾರು 12 ಪ್ರಭೇದಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಅಪ್ಪುಸಸ್ಯವಾಗಿ ಬೆಳೆಯುತ್ತದೆ. ಇದನ್ನು ಕುಂಡಸಸ್ಯ ಮತ್ತು ಕಲ್ಲೇರಿ ಸಸ್ಯವನ್ನಾಗಿ ಬೆಳೆಸುತ್ತಾರೆ. ಬಹುವಾರ್ಷಿಕ ಮೂಲಿಕೆ ಸಸ್ಯವಾದ ಇದರಲ್ಲಿ ಕಾಂಡ ಪ್ರಮುSವಾಗಿ ಕಾಣುವುದಿಲ್ಲ. ಉದ್ದವಾದ ಗರಗಸದ ಅಂಚುಳ್ಳ ಎಲೆಗಳಿವೆ. ಇವು ಗಿಡದ ಬುಡದಲ್ಲಿ ಕಮಲದ ದಳಗಳ ರೀತಿ ಜೋಡಣೆಗೊಂಡಿವೆ; ಪ್ರಭೇದಗಳಿಗೆ ಅನುಗುಣವಾಗಿ ಎಲೆಗಳಿಗೆ ವಿವಿಧ ಬಣ್ಣಗಳಿವೆ. ಹೂಗೊಂಚಲು ಚಂಡುಮಂಜರಿ ಮಾದರಿಯದು ; ಅಸಂಖ್ಯ ಉಪಪತ್ರಗಳಿಂದ ಆವೃತವಾಗಿದೆ. ಒಂದೊಂದು ಹೂವಿನಲ್ಲಿ 3 ಪುಷ್ಪಪತ್ರಗಳು, 3 ದಳಗಳು, 6 ಕೇಸರಗಳು, ಮೂರು ಕಾರ್ಪೆಲುಗಳಿಂದ ಕೂಡಿದ ನೀಚ ಸ್ಥಾನದ ಅಂಡಾಶಯ ಇವೆ. ಕೇಸರಗಳ ಬುಡ ದಳಸಮೂಹದ ಗಂಟಲಿಗೆ ಅಂಟಿಕೊಂಡಿದೆ. ಫಲ ಬಹುಬೀಜಗಳನ್ನೊಳಗೊಂಡ ಬೆರಿ ಮಾದರಿಯದು. 

ಕ್ರಿಪ್ಟ್ಯಾಂತಸ್ ಜೊನೇಟಸ್, ಕ್ರಿ. ಅಂಡ್ಯುಲೇಟಸ್, ಕ್ರಿ. ಜೆಬ್ರಿನಸ್, ಕ್ರಿ. ಏಕಾಲಿಸುಗಳು ಉದ್ಯಾನ ಪ್ರಾಮುಖ್ಯವಿರುವ ಪ್ರಭೇದಗಳು. ಕ್ರಿಪ್ಟ್ಯಾಂತಸಿನ ವಿವಿಧ ಪ್ರಭೇದಗಳನ್ನು ಮೋಸುಗಳಿಂದ (ಆಫ್‍ಸೆಟ್ಸ್) ಸುಲಭವಾಗಿ ವೃದ್ಧಿ ಮಾಡಬಹುದು.                                  
											(ಬಿ.ಎ.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ